Monday, September 27, 2021

ಹಾಲಿನಂತಿರುವ ಹಾಳೆಯಲಿ

ಹಾಲಿನಂತಿರುವ ಹಾಳೆಯಲಿ
ನಿನ್ನ ಹೆಸರೇ ಬರೆಯುವೆ

ಹಾಲಿನಂತಿರುವ ಹಾಳೆಯಲಿ
ನಿನ್ನ ಹೆಸರೇ ಬರೆಯುವೆ
ಖಾಲಿ ಅಂಗಳದ ಬಾಳಿನಲಿ
ನಿನ್ನ ಪ್ರೀತಿ  ನೆಲೆಸಿದೆ

ಮುಡಿದ ಮಲ್ಲೆ ಮರೆಗೆ ನಿಂತು
ಸುರಿದ ಮೋಡ ಸರಿದು ನಿಂತು  
ಪ್ರೀತಿ ಚಂದ್ರನ ಹಾಗೆ ಬಂದು
ತಂಪು ಎನಗೆ ನೀಡಿದೆ

ದರ್ಪಣಕೂ ಕೋಪ ಎನಗೆ
ನೋಡಿತಿಹುದು ನಿನ್ನನೇಕೆ?
ಅರ್ಪಣೆಯೇ  ನೀನ್ನ ರೂಪ   
ನನ್ನ ಹುಚ್ಚು ಪ್ರೀತಿಗೆ

ಮಧುರ ನೋಟ ಮರಳಿ  
ಹೃದಯ ತೋಟ ಅರಳಿ
ಅಮಲೇರಿಸುವ ಮಾದಕತೆ ಎಂಬ
ಪ್ರೀತಿ ಘಮವೇ ಬೀರಿದೆ.

Wednesday, September 26, 2012

ದುಡ್ಡಿನ ಮಹಿಮೆ....

ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಇದು ನಂದೇ ಜಗತ್ತು ಎಂದ ಪುಂಡ
ಇವನ ಮುಂದೆ ಪ್ರಾಮಾಣಿಕತೆ ಒಂದು ದಂಡ
ಖಾಲಿ ಡಬ್ಬದ ನಾದವೇ ಸುರ ಸಂಗೀತವು
ಜಾಲಿ ಗಿಡದ ಪುಷ್ಪವೇ ಮಂದಾರ ಪುಷ್ಪವು ||೧||

ದಡ್ಡನಾದರೇನು ದುಡ್ಡು ಒಂದು ಸಾಕು
ಮಧ್ಯ ಒಂದೇ ಬೇಕು, ವಿದ್ಯೆ ಯಾಕೆ ಬೇಕು
ಮುಂದೆ ಹೊಗಳಿ ಏರಿಸುವ ಜನ ಸಮೂಹವು
ಹಿಂದೆ ತೆಗಳಿ ಬೀಳಿಸುವ ಶ್ವಾನ ಸಮಾನವೂ ||೨||

ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

Saturday, March 26, 2011

ನಮ್ಮ ಪ್ರೀತಿ

ಅವಳು ಪ್ರೀತಿಯ ಆಳ ಅರಿಯಲಿಲ್ಲ
ನಾನು ಪ್ರೀತಿಸಿ ಮೇಲೆ ಏಳಲಿಲ್ಲ
ಬತ್ತಿ ಹೋಯಿತೆ ನಮ್ಮ ಪ್ರೀತಿ

ಮುತ್ತು ಉಂಟು ಚಿಪ್ಪಿನಲ್ಲಿ
ತುತ್ತು ಮರೆಸಿತು ರೆಪ್ಪೆಯಲ್ಲಿ
ಹನಿಯಾಗಿ ಉರುಳಿತೆ ನಮ್ಮ ಪ್ರೀತಿ

ಚಂದ್ರನಿರುವ ಬಾನಿನಲ್ಲಿ
ಚುಕ್ಕೆಗೆಲ್ಲಿ ಜೀವ ಕಳೆ
ಮಿಂಚಿ ಮರೆಯಾಯಿತೆ ನಮ್ಮ ಪ್ರೀತಿ

ರಾಗದಿ ನುಡಿಸಿದ ಗಾನದಲ್ಲಿ
ತಾಳ ತಪ್ಪಿ ಬಾಳಿನಲ್ಲಿ
ಸಂತೆಯಲ್ಲಿ ಸಂಗೀತವಾಯಿತೆ ನಮ್ಮ ಪ್ರೀತಿ

ನಶೆಯೂ ಉಂಟು ಶೀಷೆಯಲಿ
ದಿಶೆಯ ತಪ್ಪಿ ಗುಂಗಿನಲಿ
ಗಾಳಿಪಟದಂತೆ ತೇಲಿಹೋಯಿತೆ ನಮ್ಮ ಪ್ರೀತಿ

Thursday, December 2, 2010

ಮಧುರ ನಿರೀಕ್ಷೆ....

ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ
ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ |

ನನ್ನ ಕಂಗಳು ನಿನ್ನ ನಿರೀಕ್ಷೆಯಲಿ ನಿದಿರೆಯ ಮರೆತಿವೆ
ಪ್ರೀತಿಯ ಪನ್ನೀರಿನಲಿ ಪ್ರತಿ ಕ್ಷಣವೂ ಈಸುತಿವೆ
ನಿನ್ನ ಸವಿ ನೆನಪಿನಲಿ ಇಡೀ ರಾತ್ರಿ ಕಳೆದಿವೆ
ಮುಂಜಾವಿನ ಮಂಜನು ನೋಡಲು ಸೋತಿವೆ ||

ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ
ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ |

ನನ್ನ ಹೃದಯ ನಿನ್ನ ನಿರೀಕ್ಷೆಯಲಿ ಮಿಡಿತವ ಮರೆತಿದೆ
ಹೃದಯ ಗುಡುಗಿ ಕಂಗಳಿಗೆ ಅನಿರೀಕ್ಷಿತ ತಾಳ ಹಾಕಿದೆ
ಮಾಸಿದ ಮನಸಿಗೆ ಹಳೆಯ ಸವಿ ನೆನಪು ತರಿಸಿದೆ
ಇಂದು ಮಧುರ ವೇದನೆಯಿಂದ ಕರೆದಿದೆ ||

ನನ್ನವಳೆಂಬ ಪ್ರೀತಿಯಿಂದ ಮಿಡಿಯುವ ಹೃದಯ ಇರಲಿ
ನಯನಕೆ ದೂರವಾದರೂ ಈ ಹೃದಯನಾದದಲ್ಲಿ ಇರಲಿ |


-------------------
-** ನನ್ನ ಪ್ರೀತಿಯ
ಮಡದಿಗೆ

Wednesday, October 27, 2010

ಮಾಘ ಮಳೆ ನೆನೆಯೇ ರಾಮನ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ಬರದ ಬಾಳಿಗೆ ಹಸಿರನೀಯ ಬಾರದೆ
ಆರಿದ ಹೃದಯಕೆ ಅಮೃತನೀಯ ಬಾರದೆ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ಹರುಷದ ಸ್ಪರ್ಶದಿ ಭೂಮಿ ಮಿಂದಳು
ಹೊಸದಾದ ಸುಮಧುರ ಸುವಾಸನೆ ಬೀರಿಹಳು

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ನೀಲಿ ಕಂಗಳ ಕಣ್ಣೀರಿನಿಂದ ನಮ್ಮ ನೆನೆದೆ
ನನ್ನ ಪ್ರೀತಿಯ ರಾಮನ ಒಮ್ಮೆ ನೆನೆಯ ಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

ನಿನ್ನ ತುಂತುರು ಹನಿಗಳ ಮಧುರ ಮಾಲೆಯ ಹೆಣೆದೆ
ನನ್ನ ಪ್ರೀತಿಯ ರಾಮನಿಗೆ ಆ ಮಾಲೆ ಸಿಂಗರಿಸಬಾರದೇ

ಮಾಘ ಮಳೆಯ ಮೇಘವೇ
ಬೀಗು ಪ್ರೀತಿಯ ರಾಗವೆ
ಮಿಂಚು ನಿನ್ನ ಒಡವೆ
ಗುಡುಗು ನಿನ್ನ ಗಾನವೆ

Saturday, August 7, 2010

ನೆನೆಯೆ ರಾಮ ನಾಮವಾ

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ನಾನು ಎಂಬ ರಾಗದಲ್ಲಿ
ತಾಳ ತಂತಿ ಹರಿಯಿತಲ್ಲ
ಕರಗಿ ಕರಗಿ ಹೋಯಿತಲ್ಲ
ಆಯು ಎಂಬ ಮಾಯೆಯು ..

ಹೃದಯ ಪರದೆ ಬಿರಿವ ಮೊದಲೇ
ನೆನೆಯೆ ರಾಮ ನಾಮವಾ
ಮೂಢನಂತೆ ಅರಿಯಲಿಲ್ಲ
ಮೋಡಿ ಮಾಡಿದೆ ಮಧುರ ಭಾವ..

ಸಂತನಂತೆ ಬಂದೆ ಇಲ್ಲಿ
ಸಂತೆಯಲ್ಲಿ ಕಳೆದೆನಾ
ಮಧುರ ಭಾವ ಬೆಳೆಯಲಿಲ್ಲ
ಕ್ಷಮಿಸು ನಿನ್ನ ನೆನಯಲಿಲ್ಲ ..

Thursday, April 1, 2010

ಓ ನನ್ನ ಸುಜಾತೆ

ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ
ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ
ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ
ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ
ಓ ನನ್ನ ಸುಜಾತೆ ಹೇಳು? ಇನ್ನೇನು ನಿನ್ನ ಚಿಂತೆ ...

ನಿನ್ನ ಗುಣಗಳ ಬಣ್ಣಿಸ ಬೇಕೇ ನನ್ನ ಕವಿತೆ
ನಿನ್ನ ಗೌಣ ಸೌಂದರ್ಯ ಪಡೆಯಲಿಲ್ಲ ನನ್ನ ಮಾನ್ಯತೆ
ನಿನ್ನ ಸಾಮಿಪ್ಯ ಮರೆಸಿತು ಜಡ ಜೀವನದ ಸಂತೆ
ನಿನ್ನ ಮಮತೆಯಲಿ ಮರೆತಿರುವೆ ನನ್ನನ್ನೇ ನಾನು ಕಾಂತೆ
ಓ ನನ್ನ ಸುಜಾತೆ ಹೇಳು? ಇನ್ನೇನು ನಿನ್ನ ಚಿಂತೆ ...